ಪನಾಮಾ ಗಣರಾಜ್ಯ -
ಮಧ್ಯ ಅಮೆರಿಕದ ದಕ್ಷಿಣದಲ್ಲಿ ಪನಾಮಾ ಭೂ ಕಂಠದ ಪ್ರದೇಶವನ್ನೊಳಗೊಂಡಿರುವ ಗಣರಾಜ್ಯ. ಉ.ಅ. 70 15-90 39 ಮತ್ತು ಪ.ರೇ. 770 15-830 30 ನಡುವೆ ಇದೆ. ಉತ್ತರದಲ್ಲಿ ಕ್ಯಾರಿಬೀಯನ್ ಸಮುದ್ರ, ಪೂರ್ವದಲ್ಲಿ ಕೊಲಂಬಿಯ, ದಕ್ಷಿಣದಲ್ಲಿ ಫೆಸಿಫಿಕ್ ಸಾಗರ, ಪಶ್ಚಿಮದಲ್ಲಿ ಕಾಸ್ಟರೀಕ ಇವೆ. ಪನಾಮದ ವಿಸ್ತೀರ್ಣ 75,650 ಚ.ಕಿ.ಮೀ. (ಪನಾಮಾ ಕಾಲುವೆಯ ಭಾಗನವನ್ನುಳಿದು) ; ಜನಸಂಖ್ಯೆ : 14,25,343 (1970). ರಾಜಧಾನಿ ಪನಾಮಾ ನಗರ.

	ಪನಾಮಾ ರಾಜ್ಯಕ್ಕೆ ದಕ್ಷಿಣದಲ್ಲಿ ಪೆಸಿಫಿಕ್ ಸಾಗರದ ಕಡೆಗೆ 1,216 ಕಿ.ಮೀ. ಹಾಗೂ ಉತ್ತರದಲ್ಲಿ ಕ್ಯಾರಿಬೀಯನ್ ಸಮುದ್ರದ ಕಡೆಗೆ 752 ಕಿ.ಮೀ. ಸಮುದ್ರ ತೀರವಿದೆ. ಕಾಸ್ಟರೀಕದ ಕಡೆಯ ಗಡಿಗೂ ಕೊಲಂಬಿಯದ ಕಡೆಯ ಗಡಿಗೂ ನಡುವಣ ದೂರ 614 ಕಿಮೀ. ಪನಾಮಾ ಭೂಕಂಠದಲ್ಲಿ ಪೆಸಿಫಿಕ್ ಸಾಗರಕ್ಕೂ ಕ್ಯಾರಿಬೀಯನ್ ಸಮುದ್ರಕ್ಕೂ ನಡುವಣ ಕನಿಷ್ಠ ದೂರ ಸುಮಾರು 50 ಕಿ.ಮೀ. ಪೆಸಿಫಿಕ್ ಸಾಗರ ತೀರದಲ್ಲಿ ಪನಾಮಾ ಕೊಲ್ಲಿ ಇದೆ. ಕರಾವಳಿಗೆ ಸಮಾಂತರದಲ್ಲಿ ಕಣಿವೆಗಳೂ ಬಯಲೂ ಇವೆ. ಪನಾಮಾ ದೇಶದ ತೀರದ ಬಳಿಯಲ್ಲಿ ಅನೇಕ ದ್ವೀಪಗಳಿವೆ.

	ಮೇಲ್ಮೈಲಕ್ಷಣ : ಪನಾಮಾ ರಾಜ್ಯದಲ್ಲಿ ಮೂರು ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿವೆ. ರಾಜ್ಯದ ಒಟ್ಟು ವಿಸ್ತೀರ್ಣದ ಶೇ. 87ರಷ್ಟಿರುವ ಪ್ರದೇಶ ಸಮುದ್ರ ಮಟ್ಟದಿಂದ 700 ಮೀ.ಗಳಿಗಿಂತ ಹೆಚ್ಚು ಎತ್ತರವಾಗಿಲ್ಲ. ಸಮುದ್ರ ಮಟ್ಟದಿಂದ 700-493 ಮೀ. ಇರುವ ಪ್ರದೇಶ ದೇಶದ ವಿಸ್ತೀರ್ಣದ ಶೇ. 10 ರಷ್ಟಿದೆ. ಉಳಿದ ಪ್ರದೇಶ ಸಮುದ್ರಮಟ್ಟದಿಂದ 1,493 ಮೀ.ಗಳಿಗಿಂತ ಹೆಚ್ಚು ಎತ್ತರದಲ್ಲಿದೆ.

	ಕ್ಯಾರಿಬೀಯನ್ ಸಮುದ್ರವನ್ನು ಸೇರುವ ನದಿಗಳಲ್ಲಿ ಮುಖ್ಯವಾದವು ಸಿಕ್ಸವೋಲ, ಚಂಗ್ವಿನೋಲ, ರೀಯೊ ಇಂಡಿಯೊ, ಲೋ ಮಿಯೆಲ್ ಮತ್ತು ಚಾಗ್ರೆಸ್, ಫೆಸಿಫಿಕ್ ಸಾಗರವನ್ನು ಸೇರುವ ಮುಖ್ಯ ನದಿಗಳು ಚಿರಿಗ್ವಿ, ವೈಗೋ, ಸ್ಯಾನ್ ಫೆಲಿಕ್ಸ್, ಸ್ಯಾನ್ ಪ್ಯಾಬ್ಲೋ, ಸಾಂತ ಮರೀಯ, ಬಯಾನೋ, ಚುಕುನಾಕ್ ಮತ್ತು ಟುಯಿರ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುತ್ತವೆ. ಬೇಸಗೆಯಲ್ಲಿ ನೀರು ತಗ್ಗುತ್ತದೆ. ಟುಯಿರ ಮತ್ತು ಬಯಾನೋ ನದಿಗಳು ಮಾತ್ರ ಯಾನಯೋಗ್ಯ. 

	ಪನಾಮಾ ದೇಶದಲ್ಲಿ ಪನಾಮಾ ಭೂಕಂಠಕ್ಕೆ ಅಡ್ಡಲಾಗಿ ಕ್ಯಾರಿಬೀಯನ್ ತೀರದ ಕೊಲೋನ್ ಪಟ್ಟಣದಿಂದ ಪನಾಮಾ ಕೊಲ್ಲಿಯ ತೀರದ ಬ್ಯಾಲ್ಬೋವದ ವರೆಗೆ ಪನಾಮಾ ಕಾಲುವೆಯನ್ನು ನಿರ್ಮಿಸಿ ಫೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳನ್ನು ಕೂಡಿಸಲಾಗಿದೆ. (ನೋಡಿ- ಪನಾಮಾ-ನಾಲೆ)

	ವಾಯುಗುಣ : ಸಾಮಾನ್ಯವಾಗಿ ಇಲ್ಲಿಯದು ಉಷ್ಣವಲಯದ ವಾಯುಗುಣ. ಸನ್ನಿವೇಶ ಮತ್ತು ಎತ್ತರಕ್ಕೆ ಅನುಗುಣವಾಗಿ ಉಷ್ಣತೆ ವ್ಯತ್ಯಾಸವಾಗುತ್ತದೆ. ತೀರ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ಉಷ್ಣತೆ 27ಡಿ.ಸೆಂ. ಪರ್ವತ ಪ್ರದೇಶದಲ್ಲಿ 16ಡಿ.ಸೆಂ.-19ಡಿ.ಸೆಂ. ವರ್ಷವಿಡೀ ಉಷ್ಣತೆ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಸರಾಸರಿ ವಾರ್ಷಿಕ ಮಳೆ ಕ್ಯಾರಿಬೀಯನ್ ತೀರಪ್ರದೇಶದಲ್ಲಿ 2,972 ಮಿ.ಮೀ. ನಿಂದ ಫೆಸಿಫಿಕ್ ಸಾಗರ ತೀರದಲ್ಲಿ 1,600 ಮಿ.ಮೀ.

	ಸಸ್ಯಪ್ರಾಣಿ ಜೀವನ : ಪನಾಮಾದ ಬಹು ಭಾಗದಲ್ಲಿ ದಟ್ಟ ಅರಣ್ಯ ಇದೆ. ನಡುವೆ ಅಲ್ಲಲ್ಲಿ ಸವಾನ ಹುಲ್ಲುಗಾಡುಗಳಿವೆ. ಕ್ಯಾರಿಬೀಯನ್ ತೀರಪ್ರದೇಶದ್ದು ನಿತ್ಯ ಹಸುರು ಕಾಡುಗಳು. ಫೆಸಿಫಿಕ್ ತೀರ ಪ್ರದೇಶದಲ್ಲಿ ಅರ್ಧ ಪರ್ಣಪಾತಿ ಕಾಡುಗಳು ಇವೆ. ಜವುಗು ಪ್ರದೇಶಗಳಲ್ಲಿ ಗುಲ್ಮ ವೃಕ್ಷಗಳಿವೆ.

	ವನ್ಯ ಮೃಗಗಳಲ್ಲಿ ಪ್ರಧಾನವಾದವು ಆರ್ಮಡಿಲೊ, ಚಿರತೆ ಜಾತಿಯ ಓಸಿಲಾಟ್ ಬೆಕ್ಕು, ಒಪಾಸಮ್, ನಾನಾ ಬಗೆಯ ಕೋಡಗಗಳು, ಇತ್ಯಾದಿ. ಸಮುದ್ರ ತೀರದಲ್ಲಿ ಮೊಸಳೆಗಳು ವಿಶೇಷವಾಗಿವೆ. ಬಗೆಬಗೆಯ ಹಕ್ಕಿಗಳು ಹೇರಳವಾಗಿವೆ.

	ಜನ : ಪನಾಮಾದ ಆದಿವಾಸಿಗಳು ಇಂಡಿಯನರು. 16ನೆಯ ಶತಮಾನದಲ್ಲಿ ಪ್ರದೇಶವನ್ನು ಸ್ಪೇನ್ ಆಕ್ರಮಿಸಿಕೊಂಡ ಮೇಲೆ ಹೆಚ್ಚಾಗಿ ಫ್ರೆಂಚರು ಮತ್ತು ಸ್ಪ್ಯಾನಿಷರು ನೆಲಸೆಸಿದರು. ಪನಾಮಾ ಕಾಲುವೆಯ ವಲಯದಲ್ಲಿ ಅಮೆರಿಕನರ ಸಂಖ್ಯೆ ಹೆಚ್ಚು. 

	ಇಲ್ಲಿಯ ಜನರಲ್ಲಿ ರೋಮನ್ ಕ್ಯಾತೋಲಿಕರು ಹೆಚ್ಚು ಪ್ರಾಟೆಸ್ಟಂಟ್, ಆಂಗ್ಲಿಕನ್ ಮತ್ತು ಯೆಹೂದ್ಯರೂ ಇದ್ದಾರೆ.

	ರಾಜಧಾನಿಯಾದ ಪನಾಮಾ ನಗರದ ಜನಸಂಖ್ಯೆ 3,48,704 (1970). ಪ್ರಮುಖ ಪಟ್ಟಣಗಳು ಕೊಲೋನ್ (95,308), ಡಾವೀಡ್ (58,827), ಲಾ ಚರೆರ (26,026) ಮತ್ತು ಸ್ಯಾಂಟಿಯಾಗೋ (14,391).

	ಇತಿಹಾಸ : ಕೊಲಂಬಸನ ಹಡಗು 1502ರಲ್ಲಿ ಪನಾಮಾ ಭೂಕಂಠದ ಕ್ಯಾರಿಬೀಯನ್ ತೀರದಲ್ಲಿ ಹಾದು ಹೋಯಿತು. 1513ರಲ್ಲಿ ನಾವಿಕ ಬ್ಯಾಲ್ಬೋವ ಪನಾಮಾ ಭೂಕಂಠವನ್ನು ದಾಟಿ ಪೆಸಿಫಿಕ್ ಸಾಗರವನ್ನು ಕಂಡ. ಈ ಮಧ್ಯೆ ಕೆಲವು ಭಾಗಗಳಲ್ಲಿ ಜನ ನೆಲಸಿದರು. 1519ರಲ್ಲಿ ಪೆಸಿಫಿಕ್ ಸಾಗರ ತೀರದಲ್ಲಿ ಪನಾಮಾ ನಗರದ ಸ್ಥಾಪನೆಯಾಯಿತು. ಸ್ಪ್ಯಾನಿಷರು ಹೀಗೆ ಪನಾಮಾ ಭೂಕಂಠವನ್ನು ಆಕ್ರಮಿಸಿಕೊಂಡ ಮೇಲೆ ಅಟ್ಲಾಂಟಿಕ್ ಸಾಗರ ತೀರದಲ್ಲಿ ಪೋರ್ಟೋ ಬೆಲೊ ಬಂದರನ್ನು ನಿರ್ಮಿಸಿದರು. 18ನೆಯ ಶತಮಾನಕ್ಕೆ ಹಿಂದೆ ಪನಾಮಾ ದಕ್ಷಿಣ ಅಮೆರಿಕದ ಪೆರು ಮತ್ತು ಕೊಲಂಬಿಯ ರಾಜ್ಯಗಳ ಆಡಳಿತಕ್ಕೆ ಒಳಪಟ್ಟಿತ್ತು. ಸ್ವಲ್ಪ ಕಾಲ ಇದರ ಮೇಲೆ ನ್ಯೂ ಗ್ರನಾಡದ ಪ್ರಭುತ್ವವೂ ನಡೆಯಿತು. 19ನೆಯ ಶತಮಾನದಲ್ಲಿ ಪನಾಮಾ ಭೂಕಂಠಕ್ಕೆ ಅಡ್ಡಲಾಗಿ ಕಾಲುವೆಯನ್ನು ತೋಡುವ ಯೋಜನೆಯ ಬಗ್ಗೆ ಅಮೆರಿಕ ಮತ್ತು ಪನಾಮಾ ರಾಜ್ಯಗಳ ನಡುವೆ ಮಾತುಕತೆ ನಡೆಯಿತು. 1903ರಲ್ಲಿ ಪನಾಮಾದ ಜನರು ಕೊಲಂಬಿಯದ ಆಡಳಿತದ ವಿರುದ್ಧ ದಂಗೆಯೆದ್ದಾಗ ಅಮೆರಿಕ ಸಂಯುಕ್ತ ಸಂಸ್ಥಾನ ಅವರಿಗೆ ಬೆಂಬಲ ನೀಡಿತು. ಪನಾಮಾಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ ಆ ದೇಶ ಅಮೆರಿಕಕ್ಕೆ ಪನಾಮಾ ಕಾಲುವೆಯ ಪ್ರದೇಶವನ್ನು ಒಪ್ಪಿಸಿತು.

	ಪನಾಮಾ ಕಾಲುವೆಯ ಬಗ್ಗೆ 1903ರಲ್ಲಿ ಒಪ್ಪಂದದ ವಿಷಯದಲ್ಲಿ ಉಭಯ ರಾಷ್ಟ್ರಗಳಿಗೂ ಅಸಮಾಧಾನವುಂಟಾಗಿತ್ತು. 1974ರಲ್ಲಿ ಕಾಲುವೆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅಮೆರಿಕ ಒಪ್ಪಿತು. 1972ರ ಅಕ್ಟೋಬರಿನಲ್ಲಿ ಜನರಲ್ ಒಮಾರ್ ಟಾರಿಜೋಸ್ ಸರ್ಕಾರದ ಮುಖ್ಯರಾದರು. ಇವರು ಪನಾಮಾ ಕ್ರಾಂತಿಯ ನಾಯಕ.

	ಸಂವಿಧಾನ ಮತ್ತು ಸರ್ಕಾರ : ಅಕ್ಟೋಬರ್ 11, 1972ರಲ್ಲಿ ಹೊಸ ಸಂವಿಧಾನ ಜಾರಿಗೆ ಬಂದಿತು. ಈ ಸಂವಿಧಾನದ ಪ್ರಕಾರ 505 ಮಂದಿ ಸದಸ್ಯರು ಸಮುದಾಯ ಪ್ರತಿನಿಧಿಗಳ ರಾಷ್ಟ್ರೀಯ ಸಭೆ ಇರುತ್ತದೆ. ಇದರ ಅಧಿಕಾರಾವಧಿ 6 ವರ್ಷ. ವಯಸ್ಕರಿಗೆಲ್ಲ ಮತದಾನಾಧಿಕಾರವುಂಟು. ಸಭೆಯ ಆಯ್ಕೆಯಾದ ಕೂಡಲೆ ಅದು ರಾಷ್ಟ್ರಾಧ್ಯಕ್ಷ, ಉಪರಾಷ್ಟ್ರಾಧ್ಯಕರನ್ನೂ ಮತ್ತು ಸರ್ಕಾರದ ಮುಖ್ಯರನ್ನೂ ಚುನಾಯಿಸುತ್ತದೆ. ಸರ್ಕಾರಿ ವ್ಯವಹಾರಗಳನ್ನು ಹಾಗೂ ಒಪ್ಪಂದಗಳನ್ನು ಚರ್ಚಿಸಲು ವರ್ಷಕ್ಕೊಮ್ಮೆ ಒಂದು ತಿಂಗಳ ಕಾಲ ಈ ಸಭೆ ಅಧಿವೇಶನಗೊಳ್ಳುತ್ತದೆ. ಇದು 25 ಸದಸ್ಯರ ಇನ್ನೊಂದು ಸಭೆಯನ್ನು ಆಯ್ಕೆ ಮಾಡುತ್ತದೆ. 

	ರಾಷ್ಟ್ರಾಧ್ಯಕ್ಷ ಮತ್ತು ಉಪರಾಷ್ಟ್ರಾಧ್ಯಕ್ಷರು ಕೇವಲ ಉತ್ಸವಮೂರ್ತಿಗಳು. ಸರ್ಕಾರದ ಮುಖ್ಯನಿಗೆ ವಿಶೇಷ ಅಧಿಕಾರವುಂಟು. ಸರ್ಕಾರದ ಮುಖ್ಯ ಆರು ವರ್ಷಗಳ ಮೂರು ಅವಧಿಗಳಿಗೆ ಅವಿಚ್ಛಿನ್ನವಾಗಿ ಆಯ್ಕೆ ಹೊಂದಬಹುದು.

	ಆಡಳಿತಕ್ಕಾಗಿ ಪನಾಮಾವನ್ನು 9 ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ ; ಸರ್ವೋಚ್ಚ ನ್ಯಾಯಾಲಯದಲ್ಲಿ 9 ನ್ಯಾಯಾಧೀಶರಿರುತ್ತಾರೆ. ಇವರ ಅಧಿಕಾರಾವಧಿ 10 ವರ್ಷ.

	7ರಿಂದ 15ರ ವರೆಗಿನ ಮಕ್ಕಳಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರಕುತ್ತದೆ. 1974ರಲ್ಲಿ ಶಿಶುವಿಹಾರಗಳು 216, ಪ್ರಾಥಮಿಕ ಶಾಲೆಗಳು 2,168, ಸೆಕಂಡರಿ ಶಾಲೆಗಳು 225, ವಿಶ್ವವಿದ್ಯಾನಿಲಯಗಳು 2 ಇದ್ದುವು. ಪನಾಮಾ ವಿಶ್ವವಿದ್ಯಾಲಯದಲ್ಲಿ 625 ಅಧ್ಯಾಪಕರು, 1,118 ವಿದ್ಯಾರ್ಥಿಗಳು ಇದ್ದರು.

	ಪನಾಮಾ ಕಾಲುವೆ ವಲಯ ಪೆಸಿಫಿಕ್ ಸಾಗರದ ಕಡೆಯ ಬ್ಯಾಲ್ಬೋವ ನಗರದಿಂದ ಕ್ಯಾರಿಬಿಯನ್ ಸಮುದ್ರ ತೀರದ ಕ್ರಿಸ್ಟೋಬಲ್‍ವರೆಗೆ ಹರಡಿದೆ. ವಲಯದ ಜನಸಂಖ್ಯೆ 44,650 (1970). ಆಡಳಿತ ಕೇಂದ್ರ ಬ್ಯಾಲ್ಬೋವ ಹೈಟ್ಸ್. ಕಾಲುವೆ ಮತ್ತು ಕಾಲುವೆ ವಲಯದ ಆಡಳಿತವನ್ನು ಪನಾಮಾ ಕಾಲುವೆ ಕಂಪನಿ ಮತ್ತು ಕಾಲುವೆ ವಲಯದ ಅಮೆರಿಕನ್ ಸರ್ಕಾರ ನಡೆಸುತ್ತವೆ.

	ವ್ಯವಸಾಯ : ನದಿಗಳ ಜಲಾನಯನ ಪ್ರದೇಶಗಳ ನೆಲ ವ್ಯವಸಾಯಕ್ಕೆ ಯೋಗ್ಯವಾಗಿದೆ. ಮುಖ್ಯ ಬೆಳೆಗಳು ಮೆಕ್ಕೆಜೋಳ, ಬತ್ತ, ಕಬ್ಬು, ಬಾಳೆ, ಕೋಕೊ, ಸೆಣಬು, ಕಾಫಿ, ಹೊಗೆಸೊಪ್ಪು, ಹುಲ್ಲುಗಾವಲುಗಳಲ್ಲಿ ಜಾನುವಾರು ಸಾಕುತ್ತಾರೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ತೀರಗಳಲ್ಲಿ ಮೀನುಗಾರಿಕೆ ಮುಖ್ಯ ಕಸುಬು.

	ಕೈಗಾರಿಕೆ, ವಾಣಿಜ್ಯ : ಅರಣ್ಯಗಳಲ್ಲಿ ಚೌಬೀನೆಗೆ ಅಗತ್ಯವಾದ ಗಟ್ಟಿಮರಗಳಿವೆ. ಅವುಗಳಿಂದ ರಾಜ್ಯಕ್ಕೆ ಒಳ್ಳೆಯ ಆದಾಯವಿದೆ. ಬಟ್ಟೆ, ಪಾದರಕ್ಷೆ, ಮಾದಕದ್ರವ್ಯ ಮತ್ತು ಸಕ್ಕರೆ ಕಾರ್ಖಾನೆಗಳಿವೆ. ಪೆಟ್ರೋಲ್ ಶುದ್ಧೀಕರಣ ಕೇಂದ್ರಗಳುಂಟು. ಪನಾಮಾ ಕೊಲ್ಲಿಯಲ್ಲಿ ಪೆಟ್ರೋಲ್ ತೆಗೆಯಲು ಪರಿಶೋಧನೆಗಳಾಗುತ್ತಿವೆ. ಅಟ್ಲಾಂಟಿಕ್ ಸಾಗರ ತೀರದಲ್ಲಿ ಕಲ್ಲಿದ್ದಲ ಸ್ತರಗಳು ದೊರಕಿವೆ. ಸೆರೊ ಕಾಲೊರಾಡೋ ಬಳಿ ತಾಮ್ರದ ನಿಕ್ಷೇಪಗಳಿವೆ.

	ಸಾರಿಗೆ : ರಾಜ್ಯದ ಮುಖ್ಯ ರೈಲುಮಾರ್ಗ ಪನಾಮಾ ಕಾಲುವೆ ಪ್ರದೇಶದಲ್ಲಿದೆ. ಇದು ಪನಮಾ ನಗರಕ್ಕೂ ಕೊಲೋನ್ ಪಟ್ಟಣಕ್ಕೂ ಸಂಪರ್ಕ ಕಲ್ಪಸಿದೆ. ಇದರ ಆಡಳಿತ ಅಮೆರಿಕಕ್ಕೆ ಸೇರಿದೆ. ಪನಾಮಾ ಸರ್ಕಾರದ ರೈಲುಮಾರ್ಗ ಪೆಸಿಫಿಕ್ ತೀರದ ಪ್ವೆರ್ಟೋ ಆರ್ಮವೇಯಸ್‍ವರೆಗೆ ಸಾಗಿ ಲಾ ಕನ್ಸೆಪ್ಸಿಯೋನ್ ಪೆಡ್ರಿಗಾಲ್ ಮತ್ತು ಡೇವಿಡ್ ನಗರಗಳಿಗೆ ಸಂಪರ್ಕ ಕಲ್ಪಿಸತ್ತದೆ. 1973ರಲ್ಲಿ 7,102 ಕ.ಮೀ. ಉದ್ದದ ರಸ್ತೆಗಳಿದ್ದುವು. 1976ರಲ್ಲಿ ಪನಾಮಾದಿಂದ ಕೊಲಂಬಿಯ ನಗರಕ್ಕೆ ಹೆದ್ದಾರಿಯನ್ನು ವಿಸ್ತರಿಸಲಾಗಿದೆ.

	ಹಡಗು ಸಂಚಾರಕ್ಕಾಗಿ ಪನಾಮಾ ಕಾಲುವೆಯನ್ನು 1914ರಲ್ಲಿ ತೆರೆಯಲಾಯಿತು. ಇದು ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳ ನಡುವಣ ಅಂತರರಾಷ್ಟ್ರೀಯ ಜಲಮಾರ್ಗ. ಕಾಲುವೆಯಲ್ಲಿ ಸಂಚರಿಸುವ ಹಡಗುಗಳು ಹೆಚ್ಚಾಗಿ ಅನ್ಯದೇಶಗಳವು.

	ಅಂತರರಾಷ್ಟ್ರೀಯ ವಿಮಾನಗಳು ಪನಾಮಾ ರಾಜ್ಯಕ್ಕೂ ಅಮೆರಿಕ, ಕ್ಯೂಬ, ಮತ್ತು ದಕ್ಷಿಣ ಅಮೆರಿಕನ್ ರಾಜ್ಯಗಳಿಗೂ ಸಂಪರ್ಕ ಕಲ್ಪಿಸಿವೆ. ಒಳನಾಡಿನಲ್ಲೂ ವಿಮಾನ ಸೌಲಭ್ಯವಿದೆ.
(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ